ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತೆಂಗಿನಮನೆ ಗ್ರಾಮದ ನಿವಾಸಿಯಾದ ಶ್ರೀ ಕೃಷ್ಣ ಶೆಟ್ಟಿಯವರು , ದಿ. ಚಂದ್ರಶೇಖರ ಶೆಟ್ಟಿ ಹಾಗೂ ಶ್ರೀಮತಿ ಸುಶೀಲಾ ದಂಪತಿಯ ಪುತ್ರನಾಗಿ ಜನಿಸಿದರು.

ಬಾಲ್ಯದಲ್ಲಿಯೇ ಬಡತನದ ಪರಿಸ್ಥಿತಿಯನ್ನು ಎದುರಿಸಿದ ಕೃಷ್ಣ ಶೆಟ್ಟಿಯವರ ವಿದ್ಯಾಭ್ಯಾಸವು ನಾಲ್ಕನೇ ತರಗತಿಯಲ್ಲಿಯೇ ಅಂತ್ಯಗೊಂಡಿತು. ನಾರ್ವಾದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಅವರು, ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾಲ್ಯದಲ್ಲಿಯೇ ಕೆಲಸಕ್ಕೆ ತೆರಳಿ, ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ತಮ್ಮ ಜೀವನವನ್ನು ಸಾಗಿಸಲು ಆರಂಭಿಸಿದರು.

ಜೀವನದಲ್ಲಿ ಯಾವುದಾದರೂ ಒಂದು ವೃತ್ತಿಯನ್ನು ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ ಅವರು ತೆಂಗಿನ ಮರಗಳಿಂದ ಕಾಯಿಗಳನ್ನು ತೆಗೆಯುವ ಕೆಲಸವನ್ನು ಆರಂಭಿಸಿದರು. ಕಷ್ಟಕರವಾದ ಕೆಲಸವಾದರೂ ಅದನ್ನೇ ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡು ಧೈರ್ಯದಿಂದ ಜೀವನ ನಡೆಸುತ್ತಿದ್ದರು.

ಆದರೆ 2025ರ ಡಿಸೆಂಬರ್ 29 ಅವರ ಜೀವನದಲ್ಲಿ ಮರೆಯಲಾಗದ ದಿನವಾಯಿತು. ಅಂದು ಎಂದಿನಂತೆ ತೆಂಗಿನಕಾಯಿ ತೆಗೆಯುವ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ, ಸುಮಾರು 60 ಅಡಿ ಎತ್ತರದ ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು, ಗಂಭೀರವಾದ ಬೆನ್ನುಹುರಿ ಅಪಘಾತಕ್ಕೆ ಒಳಗಾದರು. ಆ ಒಂದು ಘಟನೆ ಅವರ ಜೀವನದ ದಿಕ್ಕನ್ನೇ ಬದಲಿಸಿತು.

ತಕ್ಷಣ ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಕೊಪ್ಪದ ಪ್ರಶಮಣಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕಾದ ಪರಿಸ್ಥಿತಿ ಎದುರಾಯಿತು.

ಅಪಘಾತದ ಪರಿಣಾಮವಾಗಿ ತಮ್ಮ ದೈಹಿಕ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ ಎಂಬ ಸಂಪೂರ್ಣ ಅರಿವು ಕೃಷ್ಣ ಶೆಟ್ಟಿಯವರಿಗೆ ಆರಂಭದಲ್ಲಿ ಇರಲಿಲ್ಲ. ಕುಟುಂಬದವರಿಗೆ ಪರಿಸ್ಥಿತಿಯ ಅರಿವಿದ್ದರೂ, ಅವರ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ತಕ್ಷಣ ಅವರಿಗೆ ತಿಳಿಸಲಾಗಿರಲಿಲ್ಲ.

ಸುಮಾರು ಆರು ತಿಂಗಳ ನಂತರ, ಕುಟುಂಬದವರು ವಾಸ್ತವ ಸ್ಥಿತಿಯನ್ನು ಅವರಿಗೆ ತಿಳಿಸಿದರು. “ಇನ್ನು ಮುಂದೆ ಸ್ವತಂತ್ರವಾಗಿ ನಡೆಯಲು ಸಾಧ್ಯವಾಗದೇ, ಗಾಲಿಕುರ್ಚಿಯ ಸಹಾಯದಿಂದಲೇ ಜೀವನ ಸಾಗಿಸಬೇಕಾಗಬಹುದು” ಎಂಬ ವಿಷಯವನ್ನು ಅವರು ತಿಳಿದುಕೊಂಡಾಗ, ಸಹಜವಾಗಿಯೇ ಅವರು ತೀವ್ರ ಆಘಾತಕ್ಕೆ ಒಳಗಾದರು.

ಆದರೆ ಆ ಆಘಾತವೇ ಅವರ ಅಂತ್ಯವಾಗಲಿಲ್ಲ. ವಾಸ್ತವವನ್ನು ಅರ್ಥಮಾಡಿಕೊಂಡ ಕೃಷ್ಣ ಶೆಟ್ಟಿಯವರು ನಿಧಾನವಾಗಿ ಪರಿಸ್ಥಿತಿಯನ್ನು ಸ್ವೀಕರಿಸಿ, “ನನ್ನ ಜೀವನ ಇಲ್ಲಿಗೇ ಮುಗಿದಿಲ್ಲ” ಎಂಬ ಮನೋಭಾವದಿಂದ ಮುಂದೆ ಸಾಗಲು ನಿರ್ಧರಿಸಿದರು.

ನಂತರ ತೀರ್ಥಹಳ್ಳಿಯಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪಡೆದು ಚೇತರಿಸಿಕೊಳ್ಳಲು ಪ್ರಯತ್ನಿಸಿದರು. ಯಾವುದೇ ವಿಶೇಷ ಪುನಶ್ಚೇತನ ಸೇವೆಯ ಸಹಾಯವಿಲ್ಲದಿದ್ದರೂ, ತಮ್ಮ ಸ್ವಂತ ಪ್ರಯತ್ನ ಮತ್ತು ದೃಢನಿಶ್ಚಯದಿಂದ ದೈಹಿಕವಾಗಿ ಚೇತರಿಸಿಕೊಳ್ಳಲು ನಿರಂತರ ಪ್ರಯತ್ನಿಸಿದರು. ಸ್ಟಿಕ್ ನ ಸಹಾಯದಿಂದ ಹೆಜ್ಜೆ ಇಡಲು ಆರಂಭಿಸಿ, ದಿನದಿಂದ ದಿನಕ್ಕೆ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಶ್ರಮಿಸಿದರು.

ಅವರು ಒಂದೇ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು: “ಹೀಗೆ ಕುಳಿತುಕೊಂಡರೆ ಜೀವನ ಸಾಗುವುದಿಲ್ಲ. ನಾನು ಏನಾದರೂ ಮಾಡಬೇಕು.”

ಈ ಆಲೋಚನೆಯಿಂದ ಅವರು ಸ್ವಂತವಾಗಿ ಒಂದು ಹೋಟೆಲ್ ಮತ್ತು ಅಂಗಡಿಯನ್ನು ಆರಂಭಿಸುವ ಪ್ರಯತ್ನ ಮಾಡಿದರು. ಆದರೆ ನಿರೀಕ್ಷಿಸಿದಂತೆ ವ್ಯವಹಾರ ನಡೆಯದೆ ಹೆಚ್ಚಿನ ನಷ್ಟ ಉಂಟಾದ ಕಾರಣ, ಕೊನೆಗೆ ಅದನ್ನು ಮುಚ್ಚಬೇಕಾಯಿತು.

ಆದರೂ ಆ ಸೋಲು ಕೂಡ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಲಿಲ್ಲ.“ಅರ್ಧ ದಾರಿಯಲ್ಲಿ ಕೈಬಿಡಬಾರದು. ನಾನು ಮತ್ತೆ ಆರಂಭಿಸಬೇಕು.” ಎಂಬ ದೃಢವಾದ ಮನೋಭಾವವನ್ನು ಅವರು ಉಳಿಸಿಕೊಂಡರು.ಇಂದು ಅವರು ಕೆಲವೊಂದು ಅಂಗಡಿಗಳಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಾ, ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಕೃಷ್ಣ ಶೆಟ್ಟಿಯವರ ಜೀವನವು ಕೇವಲ ಒಂದು ಅಪಘಾತದ ಕಥೆಯಲ್ಲ. ಅದು ಬಡತನದ ನಡುವೆಯೂ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ, ಆಕಸ್ಮಿಕವಾಗಿ ಎದುರಾದ ಬೆನ್ನುಹುರಿ ಅಪಘಾತ, ಆಘಾತದ ನಡುವೆಯೂ ವಾಸ್ತವವನ್ನು ಸ್ವೀಕರಿಸುವ ಮನಸ್ಥಿತಿ, ಸೋಲಿನ ನಂತರವೂ ಮತ್ತೆ ಎದ್ದು ನಿಲ್ಲುವ ಧೈರ್ಯ ಮತ್ತು ಸ್ವಾವಲಂಬನೆಯತ್ತ ಸಾಗುವ ನಿರಂತರ ಅವರ ಪ್ರಯತ್ನ ಅವರನ್ನು ಯಶಸ್ಸಿನ ದಾರಿಗೆ ಕರೆದುಕೊಂಡು ಹೋಗಿದೆ.ಎಂಬುದಕ್ಕೆ ಇವರ ಕಥೆಯೇ ಮಾದರಿ.